5ನೆಯ ಶತಮಾನದ ಅಂತ್ಯದಿಂದ ಪೂರ್ವೀ ಗಂಗರ ರಾಜಧಾನಿಯಾಗಿದ್ದ ನಗರ. ಇದಕ್ಕೆ ಕಳಿಂಗ ಪಟ್ಟಣವೆಂದೂ ಹೆಸರಿತ್ತು. ಈಗಿನ ಒರಿಸ್ಸದ ಗಂಜಾಂ ಜಿಲ್ಲೆಯಲ್ಲಿರುವ ಮುಖಲಿಂಗಂ ಪ್ರಾಚೀನ ಕಳಿಂಗನಗರವೆಂದು ಇತಿಹಾಸಕಾರರು ಒಪ್ಪಿದ್ದಾರೆ. ಪೂರ್ವೀಗಂಗರ ಮೂಲಪುರುಷ ಮಹಾರಾಜ 1ನೆಯ ಇಂದ್ರವರ್ಮ (496-535). ತ್ರಿಕಳಿಂಗಾಧಿಪತಿಯೆಂಬ  ಬಿರುದಾಂಕಿತನಾಗಿ ಕಳಿಂಗನಗರದಿಂದ ರಾಜ್ಯಭಾರ ಮಾಡಿದ. ಪ್ರಾರಂಭ ಕಾಲದಲ್ಲಿ ಈ ರಾಜ್ಯ ಈಗಿನ ಶ್ರೀಕಾಕುಳಂ ಜಿಲ್ಲೆಗೆ ಸೀಮಿತವಾಗಿದ್ದರೂ ಕ್ರಮೇಣ ಪ್ರಾಬಲ್ಯ ಹೊಂದಿ ಈಶಾನ್ಯದಲ್ಲಿ ಭಾಗೀರಥೀ ತೀರದಿಂದ ಗೋದಾವರಿಯವರೆಗೂ ಹಬ್ಬಿತ್ತು.  ಕಳಿಂಗ ನಗರ ರಾಜಧಾನಿಯಾಗಿದ್ದುದರಿಂದ ಅಲ್ಲಿ ಆಳುತ್ತಿದ್ದ ರಾಜವಂಶಕ್ಕೆ ಕಳಿಂಗದ ಗಂಗರೆಂದೇ ಹೆಸರಾಯಿತು. ತಾವು ಮೂಲತಃ ಕೋಲಾಹಲಪುರದವರೆಂದು ಇವರು ಹೇಳಿಕೊಳ್ಳುವುದರಿಂದ, ಇವರದು ಕೋಲಾರವೂ ಅನಂತರ ತಲಕಾಡೂ ರಾಜಧಾನಿಗಳಾಗಿದ್ದ ಪಶ್ಚಿಮ ಗಂಗರ ವಂಶದ ಶಾಖೆಯಾಗಿರಬಹುದೆಂದೂ ಒರಿಸ್ಸದಲ್ಲಿ ಆಳಿದ ಶ್ವೇತಕ ಗಂಗಮನೆತನದವರು ಈ ವಂಶದವರಾಗಿದ್ದು ಪ್ರಾರಂಭದಲ್ಲಿ ಇವರ ಅಧೀನರಾಗಿದ್ದರೆಂದೂ ಅಭಿಪ್ರಾಯಪಡಲಾಗಿದೆ.  ಕಳಿಂಗ ನಗರ 5 ನೆಯ ಶತಮಾನದಿಂದ 11 ನೆಯ ಶತಮಾನದವರೆಗೂ ಉಚ್ಛ್ರಾಯ ಸ್ಥಿತಿಯಲ್ಲಿತ್ತು.  ಮುಖಲಿಂಗಂ ಬಳಿ ಸು.9ನೆಯ ಶತಮಾನದ್ದೆನ್ನಬಹುದಾದ, ನಾಗರ ವಾಸ್ತುಶೈಲಿಗೆ ಸೇರಿದ, ಕೆಲವು ದೇವಾಲಯಗಳಿವೆ.  ಇವುಗಳಲ್ಲಿ ಮುಖಲಿಂಗೇಶ್ವರ ದೇವಾಲಯ ಮುಖ್ಯವಾದದ್ದು. ಇದರಲ್ಲಿ ಐದು ಗರ್ಭಗುಡಿಗಳಿವೆ. ಬಾದಾಮಿ ಚಾಳುಕ್ಯ ಮತ್ತು ಗುಪ್ತಶೈಲಿಯ ಪ್ರಭಾವಗಳನ್ನಿಲ್ಲಿ ಕಾಣಬಹುದು.          

 (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ